ನಾವು ಏಕೆ ಜಾಹೀರಾತು ಸ್ಥಳವನ್ನು ಮಾರಾಟ ಮಾಡುತ್ತೇವೆ? ಹುಡುಕಾಟದ ಫಲಿತಾಂಶಗಳನ್ನು ಏಕೆ ಮಾರಾಟ ಮಾಡುತ್ತಿಲ್ಲ?

ಜಗತ್ತಿನಲ್ಲಿ ಪ್ರತಿಯೊಂದೂ ಮಾರಾಟಕ್ಕಿರುವಾಗ ಜಾಹೀರಾತುದಾರರು ನಮ್ಮ ಹುಡುಕಾಟ ಫಲಿತಾಂಶಗಳಲ್ಲಿ ಸೂಕ್ತವಾದ, ಅತ್ಯುತ್ತಮ ಸ್ಥಳವನ್ನು ಖರೀದಿಸುವುದರಲ್ಲಿ ತಪ್ಪೇನಿದೆ?

ಪ್ರಶ್ನೆಗೆ ಉತ್ತರ ಸರಳವಾಗಿದೆ. Google ಅನ್ನು ಬಳಸುವಾಗ ನಿಮ್ಮ ಕಣ್ಣಿಗೆ ಬೀಳುವ ಸಂಗತಿಯನ್ನು ನೀವು ಯಾವುದೇ ಹಿಂಜರಿಕೆಯಿಲ್ಲದೇ ನಂಬುವಂತಾಗಬೇಕು ಎಂಬುದು ನಮ್ಮ ಭಾವನೆ. ನಾವು ನಮ್ಮ ಹುಡುಕಾಟದ ಬಳಕೆದಾರರಿಗೆ ಮೊಟ್ಟ ಮೊದಲ ದಿನದಿಂದಲೂ ಅತ್ಯಂತ ಪ್ರಸ್ತುತವೆನಿಸುವ ಉತ್ತರಗಳನ್ನು ಹಾಗೂ ಫಲಿತಾಂಶಗಳನ್ನು ಒದಗಿಸುತ್ತಲೇ ಬಂದಿದ್ದೇವೆ.

ವೆಬ್ ಪುಟಕ್ಕೆ ಯಾರೆಲ್ಲಾ ಭೇಟಿ ನೀಡುತ್ತಾರೆ ಹಾಗೂ ಆ ಪುಟದಲ್ಲಿನ ವಿಷಯವು ನಿಮ್ಮ ಹುಡುಕಾಟಕ್ಕೆ ಎಷ್ಟರ ಮಟ್ಟಿಗೆ ಪ್ರಸ್ತುತವಾಗಿದೆ ಎಂಬುದನ್ನು Google ಹುಡುಕಾಟ ಫಲಿತಾಂಶಗಳು ಸೂಕ್ಷ್ಮವಾಗಿ ಗಮನಿಸುತ್ತವೆ. ಆನ್‌ಲೈನ್ ಸಮುದಾಯವು ಮಹತ್ವದ್ದು ಎಂದು ಯಾವುದನ್ನು ನಂಬುತ್ತದೋ ಅಂತಹ ವಿಷಯಗಳನ್ನು ನಮ್ಮ ಫಲಿತಾಂಶಗಳು ಎತ್ತಿ ಹಿಡಿಯುತ್ತವೆಯೇ ವಿನಾಃ ನಾವು ಅಥವಾ ನಮ್ಮ ಪಾಲುದಾರರು ನಿಮಗೆ ಒದಗಿಸಬೇಕು ಎಂದು ನಿರ್ಧರಿಸುವ ವಿಷಯಗಳನ್ನಲ್ಲ.

ಕೆಲವೊಮ್ಮೆ, ಪ್ರಸ್ತುತವೆನಿಸುವ ಜಾಹೀರಾತುಗಳು ನಿಜವಾದ ಹುಡುಕಾಟ ಫಲಿತಾಂಶಗಳಷ್ಟೇ ಪ್ರಯೋಜನಕಾರಿಯಾಗಬಹುದು ಎಂಬುದು ನಮ್ಮ ಅಚಲ ನಂಬಿಕೆ. ಇಂಥ ಸಂದರ್ಭದಲ್ಲಿ, ಯಾವುದೇ ವಿಷಯದ ಬಗ್ಗೆ ಯಾರಿಗೂ ಗೊಂದಲವಾಗುವುದು ನಮಗೆ ಇಷ್ಟವಿಲ್ಲ.

Google ನಲ್ಲಿನ ಪ್ರತಿಯೊಂದು ಜಾಹೀರಾತನ್ನೂ ಸ್ಪಷ್ಟವಾಗಿ ಗುರುತಿಸಲಾಗಿರುತ್ತದೆ. ಅಲ್ಲದೇ, ನಿಜವಾದ ಹುಡುಕಾಟ ಫಲಿತಾಂಶಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿರುತ್ತದೆ. ಜಾಹೀರಾತುದಾರರು ಜಾಹೀರಾತು ಸ್ಥಳದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಬೇಕಾದರೆ ಹೆಚ್ಚಿನ ಹಣಕೊಡಬೇಕು. ಆದರೆ ಹಣ ಪಾವತಿಸಿದ್ದೇವೆ ಎಂಬ ಒಂದೇ ಕಾರಣಕ್ಕೆ ಹುಡುಕಾಟ ಫಲಿತಾಂಶಗಳಲ್ಲಿನ ಮೇಲಿನ ಸ್ಥಾನಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನೀವು ಹುಡುಕಿರುವ ಹುಡುಕಾಟದ ಪದಗಳಿಗೆ ಪ್ರಸ್ತುತವೆನಿಸುವ ಜಾಹೀರಾತುಗಳನ್ನು ಮಾತ್ರವೇ ಪ್ರದರ್ಶಿಸಲಾಗುತ್ತದೆ. ಹೀಗಾಗಿ ನಿಮಗೆ ಪ್ರಯೋಜನಕಾರಿಯಾದ ಜಾಹೀರಾತುಗಳಷ್ಟೇ ನಿಮಗೆ ಕಾಣಿಸಿಕೊಳ್ಳುತ್ತವೆ. ಅಲ್ಲದೇ, ನೀವು ನಮೂದಿಸಿರುವ ಹುಡುಕಾಟ ಪದಗಳಿಗೆ ಸಂಬಂಧಪಟ್ಟ ಜಾಹೀರಾತುಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಇದರರ್ಥ, ನಿಮಗೆ ಪ್ರಯೋಜಕಾರಿಯಾದ ಜಾಹೀರಾತುಗಳಷ್ಟೇ ನಿಮಗೆ ಕಾಣಿಸುತ್ತವೆ.

ಕೆಲವು ಆನ್‌ಲೈನ್ ಸೇವೆಗಳಲ್ಲಿ ಯಾವುದು ಜಾಹೀರಾತು ಮತ್ತು ಯಾವುದು ಹುಡುಕಾಟದ ಫಲಿತಾಂಶ ಎಂದು ಪ್ರತ್ಯೇಕಿಸುವುದು ಕಷ್ಟವಾಗುತ್ತದೆ. ಆದರೆ ಇವುಗಳನ್ನು ಪ್ರತ್ಯೇಕವಾಗಿಡುವುದು ಅತ್ಯಂತ ಮಹತ್ವದ ವಿಷಯ ಎಂದು ಅಂಥ ಸೇವಾ ಪೂರೈಕೆದಾರರು ಭಾವಿಸುವುದಿಲ್ಲ.

ಆದರೆ ನಾವು ಹಾಗಲ್ಲ.